ಭಾಗಲಪುರ
	ಭಾರತದ ಬಿಹಾರ ರಾಜ್ಯದ ಒಂದು ವಿಭಾಗ, ಜಿಲ್ಲೆ, ತಾಲ್ಲೂಕು ಮತ್ತು ಇವೆಲ್ಲದರ ಆಡಳಿತ ಕೇಂದ್ರ ನಗರ, ಸಂತಾಲ್ ಪರಗಣ, ಭಾಗಲಪುರ, ಸಹರ್ಸಾ, ಪೂರ್ಣಿಯಾ ಮತ್ತು ಮೋಂಫಿರ್ ಜಿಲ್ಲೆಗಳು ಈ ವಿಭಾಗಕ್ಕೆ ಸೇರಿವೆ.

	ಭಾಗಲಪುರ ಜಿಲ್ಲೆ ಬಿಹಾರ ರಾಜ್ಯದ ಪೂರ್ವದಲ್ಲಿದೆ. ಪಶ್ಚಿಮದಲ್ಲಿ ಮೋಂಘಿರ್, ಪೂರ್ವ ಮತ್ತು ದಕ್ಷಿಣದಲ್ಲಿ ಸಂತಾಲ್ ಪರಗಣಗಳು, ಉತ್ತರದಲ್ಲಿ ಸಹರ್ಸಾ, ಪೂರ್ಣಿಯಾ ಮತ್ತು ಕಟಿಹಾರ್ ಜಿಲ್ಲೆಗಳು ಸುತ್ತವರಿದಿವೆ. ಜಗದೀಶ್‍ಪುರ, ಷಹಕುಂದ್, ಸುಲ್ತಾನ್‍ಗಂಜ್, ನತ್ನಗರ್, ಸಬೋರ್, ಕಾಲ್‍ಗಾಂಗ್, ಪಿರ್‍ಪೈಂತಿ, ಸೊನ್ಹಾಲ, ನೌಗಚಿಯ ಬಿಹಪುರ್, ಗೋಪಾಲ್‍ಪುರ್, ಬಂಕ, ಕಟೋರಿಯ, ಚನನ್, ಬೆಲ್ಹಾರ್, ಶಂಭುಗಂಜ್, ಅಮರ್‍ಪುರ, ರಾಜೌನ್, ಧುರೈಯ, ಬರ್ಹತ್ ಮತ್ತು ಚಾಸಿ ತಾಲ್ಲೂಕುಗಳು. ಜಿಲ್ಲಾ ವಿಸ್ತೀರ್ಣ 5,656 ಚಕಿಮೀ. ಜನಸಂಖ್ಯೆ 26,21,427 (1981).

	ಜಿಲ್ಲೆಯ ಉತ್ತರಭಾಗ ಮೆಕ್ಕಲು ಮಣ್ಣಿನ ಮೈದಾನ. ದಕ್ಷಿಣದಲ್ಲಿ ಕಾಡಿನಿಂದ ಕೂಡಿದ ಛೋಟಾ ನಾಗಪುರದ ಪ್ರಸ್ಥಭೂಮಿ, ಗಂಗಾ ಮತ್ತು ಚಂದನ್ ನದಿಗಳು ಭೂಮಿಯನ್ನು ಫಲವತ್ತಾಗಿಸಿವೆ. ಕಾಳುಗಳು, ಎಣ್ಣೆಬೀಜ ಇಲ್ಲಿಯ ಮುಖ್ಯ ಬೆಳೆಗಳು.

	ಅಕ್ಕಿ, ಸಕ್ಕರೆ ಹಾಗೂ ಹಿಟ್ಟು ತಯಾರಿಸುವ ಮಿಲ್ಲುಗಳು ಉಣ್ಣೆಯ ನೇಯ್ಗೆ, ಕಂಬಳಿ, ಜಮಖಾನ ತಯಾರಿಕೆ, ಬಿದರೆ ಕೆಲಸ, ಕೆತ್ತನೆ ಕೆಲಸ, ಎಣ್ಣೆ ಗಿರಣಿ, ಹಗ್ಗ ತಯಾರಿಕೆ ಇಲ್ಲಿಯ ಮುಖ್ಯ ಕೈಗಾರಿಕೆಗಳು.

	ಭಾಗಲಪುರ ನಗರ ರಾಜಮಹಲ್ ಬೆಟ್ಟಗಳ ಪಶ್ಚಿಮದಲ್ಲಿ ಗಂಗಾನದಿಯ ಬಲದಂಡೆಯ ಮೇಲೆ ಹರಡಿದೆ. ನಗರ ಜನಸಂಖ್ಯೆ 2,250,62 (1981). ಮೂರು ಪುಟ್ಟ ಹೊಳೆಗಳಾದ ಸುಂದರ್, ಚಂದನ್ ಮತ್ತು ಬುದುವಾ ಈ ನಗರದ ಬಳಿ ಗಂಗಾ ನದಿಯನ್ನು ಸೇರುತ್ತವೆ. ಇವುಗಳ ಮೂಲಕ ಗಂಗಾನದಿ ಬಯಲಿನ ಸುತ್ತಲಿನ ರಸ್ತೆ ಮತ್ತು ರೈಲುಮಾರ್ಗಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಜೊತೆಗೆ ಗಂಗಾನದಿಯ ಜಹಜು ಪ್ರಯಾಣದ ಅನುಕೂಲವೂ ಈ ನಗರಕ್ಕಿದೆ. ರೈಲುಮಾರ್ಗದ ಮುಖಾಂತರ ಕಲ್ಕತ್ತಾಕ್ಕೆ 424 ಕಿಮೀ ದೂರದಲ್ಲೂ ನದಿಗಳ ಮುಖಾಂತರ 520 ಕಿಮೀ ದೂರದಲ್ಲೂ ಈ ನಗರವಿದೆ. ಮೊಗಲ್ ಇತಿಹಾಸದ ದಾಖಲೆಗಳ ಪ್ರಕಾರ ಅಕ್ಬರನ ಸೈನ್ಯ ಈ ಸ್ಥಳಕ್ಕೆ ಬಂದಿತ್ತು. ಇದರ ಗುರುತಾಗಿ ಈ ನಗರದ ಪಶ್ಚಿಮಕ್ಕೆ ಅಕ್ಬರ್‍ನಗರ ಎಂಬ ಪುಟ್ಟ ನಗರಪ್ರದೇಶವಿದೆ. ನಗರಕ್ಕೆ ಸಮೀಪವಾಗಿ ಜೈನರ ಎರಡು ಪವಿತ್ರ ಕ್ಷೇತ್ರಗಳಿವೆ. 1864ರಲ್ಲಿ ಇಲ್ಲಿ ನಗರಸಭೆಯನ್ನು ಸ್ಥಾಪಿಸಲಾಯಿತು. ಈ ನಗರ ಆರೋಗ್ಯಕರ ವಾಯುಗುಣಕ್ಕಾಗಿ ಪ್ರಸಿದ್ಧಿಪಡೆದಿದೆ. ಭಾಗಲಪುರ ವಿಶ್ವ ವಿದ್ಯಾಲಯವಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ